Tuesday, May 10, 2011

ಫಲಕೋತ್ಸವ-ಸೀಸನ್ ೩-೧೯


ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತವನ್ನು ೧:೧:೧ ಅನುಪಾತದಲ್ಲಿ ಮಿಶ್ರಣ ಮಾಡಿ, ಈ ಬೋರ್ಡನ್ನು ಬರೆಯಲಾಗಿದೆ.ಆಂಗ್ಲ ಪದಕ್ಕೆ ಸಂಸ್ಕೃತದ ವಿಭಕ್ತಿ ಸೇರಿಸಿ ಆ ಹೊಸ ಪದವನ್ನು ಕನ್ನಡದಲ್ಲಿ ಬರೆದಿರುವ ಈ ಪುಣ್ಯಾತ್ಮನಿಗೇ ಔಷಧಿಯ ಅವಶ್ಯಕತೆ ಇದೆ ಅಂತ ನನಗೆ ಅನ್ನಿಸಿತು.ಸಾಲದಕ್ಕೆ, ಆಂಗ್ಲವನ್ನು ಸಾರಾಸಗಟಾಗಿ ಕೊಲೆಗೈದಿದ್ದಾನೆ.

ಈ ಫೋಟೋ ನಾನೇ ತೆಗೆದಿದ್ದಾದರೂ ಇದರ  ಹಿಂದೆ ಒಂದು ಸ್ವಾರಸ್ಯಕರ ಕತೆ ಇದೆ. ಒಂದು ಮದ್ಯಾಹ್ನ ನಮ್ಮ ತಂದೆ ಫೋನ್ ಮಾಡಿ, "ಲಕ್ಷ್ಮೀ, ನಾನು ಮತ್ತು ನಿಮ್ಮಮ್ಮ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂತಿದಿವಿ, ನೀನು ಫ್ರೀ ಇದ್ರೆ ಬಾ" ಅಂತ ಅಂದ್ರು. ನನಗೆ ವಿದ್ಯಾರ್ಥಿ ಭವನದ ದೋಸೆ ಅಂದರೆ ಪಂಚಪ್ರಾಣ. ನಾನು ಆಗ ಕಡೆಯ ಸೆಮ್ ಎಮ್.ಎಸ್ಸಿ ಓದ್ತಿದ್ದೆ. ಲ್ಯಾಬ್ ಇರ್ಲಿಲ್ಲ ಆದ್ದರಿಂದ ಆಟೋ ದಲ್ಲಿ ಗಾಂಧಿ ಬಜಾರಿಗೆ ಬಂದೆ. ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದ ನಂತರ, ಅಣ್ಣ, " ನೀನೊಂದು ಫೋಟೋ ತೆಗಿಬೇಕು" ಅಂದ್ರು. ನಾನು " ದೋಸೆದಾ ?" ಅಂದೆ. ಅದಕ್ಕೆ ಅವ್ರು, ಇಲ್ಲ, ಒಂದು ಬೋರ್ಡ್ ದು. ನಿನ್ನ ಬ್ಲಾಗಿಗೆ ಸರಿಗಿರತ್ತೆ " ಅಂದ್ರು.ನನಗೆ ಆಗ್ಲೆ ಗೊತ್ತಾಗಿದ್ದು, ಸ್ವತಃ ಸ್ವಯಂ ಸಾಕ್ಷಾತ್ ನಮ್ಮಪ್ಪ ಈ ಬ್ಲಾಗ್ ನ ಫಾಲೋ ಮಾಡ್ತಾರೆ ಅಂತ. ವಿದ್ಯಾರ್ಥಿ ಭವನದ ಪಕ್ಕದಲ್ಲಿರೋ ಈ ಮೆಡಿಕಲ್ ಶಾಪಿನ ಬೋರ್ಡನ್ನು ತೋರಿಸಿ, "ನೋಡು, ಹೇಗಿದೆ ಹೊಸ ಪದದ ಆವಿಷ್ಕಾರ!" ಅಂದ್ರು. ನಾನು ನಮ್ಮಪ್ಪಂಗೆ, "ಎಂಥಾ ಬೋರ್ಡ್ ಅಣ್ಣಾ...ಸಕ್ಕತ್ತಾಗಿದೆ" ಅಂತ ಶಭಾಶ್ ಗಿರಿ ಕೊಟ್ಟು ಕ್ಲಿಕ್ಕಿಸಿದ ಫೋಟೋ ಇದು.

1 comment:

Arjun Sharma said...

"ಸ್ವತಃ ಸ್ವಯಂ ಸಾಕ್ಷಾತ್" -- ಮೂರು ಸಲ ಪ್ರತ್ಯಕ್ಷ ಆಗೋ ಥರ ಇದೆ ಇದು.

"Pharmacie" ಅನ್ನೋದು ಫ್ರೆಂಚ್ ಶೈಲಿಯಲ್ಲಿ ಬರ್ದಿರೋ ಥರ ಇದೆ. ಆಂಗ್ಲ, ಸಂಸ್ಕೃತ (ಜೊತೆಗೆ ಷಷ್ಠಿ ವಿಭಕ್ತಿ ಬೇರೆ), ಕನ್ನಡ ಎಲ್ಲ ಬೆರೆಸಿರೋ ಭಾಷಾಭೀಮನಿಗೆ ಫ್ರೆಂಚ್ ಯಾವ ಮೂಲೆ?