ನಿಮಗೆ ಈ ಫಲಕ ಅರ್ಥ ಆದರೆ ನನಗೂ ಅರ್ಥ ಮಾಡಿಸಿ. ಫ್ರೀ ಸಿಮ್ಮು ಅಂತಾರೆ, dead or alive ಅಂತಾರೆ, ಹಳೆ ಮೊಬೈಲ್ ಕೊಟ್ಟು ಹೊಸದು ಪಡೆಯಿರಿ ಅಂತಾರೆ, ಇದರಲ್ಲಿ ಯಾವುದು ಸತ್ತು ಯಾವುದು ಬದುಕಿರಬೇಕು ? ಸಿಮ್ಮಾ ?? ಫೋನಾ ??
ಕಿವಿಯನ್ನು ಬೋರ್ ವೆಲ್ಲ್ ಮಾಡಿರುವ ಪುಣ್ಯಾತ್ಮನೀತ ! "Ear piercing" ಬದಲು "Ear boring" ಅಂತ ಹಾಕಿದ್ದಾರೆ. ಕನ್ನಡದಲ್ಲಿಯಾದರೂ ಅರ್ಥ ನೆಟ್ಟಗೆ ಬರುವಂತೆ ಬರೆದಿದ್ದಾರಾ ? ಅದೂ ಇಲ್ಲ ! ಕಿವಿಗಳು ಚುಚ್ಚುವ ಸ್ಥಳ ಅಂತೆ! ವಿಭಕ್ತಿ ಪ್ರತ್ಯಯದ ಪಾಠ ಕಲ್ತಿಲ್ಲ ಪಾಪ....ಇದಕ್ಕೆ "ಕರ್ಣಕಾಂಡ" ಎಂಬ ಪದವೇ ಸರಿಯಾದ ವಿವರಣೆಯೇನೋ ಅನ್ನಿಸತ್ತೆ ನನಗೆ !
ಫಲಕೋತ್ಸವ season 1 ಕಂಡ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತರಾಗಿ ಈಗ ಫಲಕೋತ್ಸವದ ಎರಡನೇ season ಅನ್ನು ಪ್ರಾರಂಭಿಸುತ್ತಿದ್ದೇವೆ.ಈ ಬಾರಿಯೂ ವಿಚಿತ್ರ, ವಿಶೇಷ, ನಾನಾರ್ಥಗಳುಳ್ಳ ಫಲಕಗಳ ಪ್ರದರ್ಶನ ನಡೆಯಲಿದೆ. ಕಳೆದ ಸರಣಿಯಂತೆಯೇ ಈ ಸೀಸನ್ ನಲ್ಲೂ ನಿಮ್ಮ ಪ್ರೋತ್ಸಾಹದಾಯಕ ಕಮೆಂಟುಗಳ ನಿರೀಕ್ಷೆಯಲ್ಲಿದ್ದೇವೆ.
ಈ ಬಾರಿಯ ಫೋಟೋ ತ್ರಿಸ್ಸೂರಿನ ದೇವಸ್ಥಾನದ ಭೋಜನಶಾಲೆಯದು. ಕನ್ನಡದ ಬರಹದಲ್ಲಿ ಆಗಿರುವ ಅವಾಂತರವನ್ನು ನೀವೇ ನೋಡಿ!
ಈ ಚಿತ್ರವನ್ನು ಇಲ್ಲಿ ಹಾಕಿರುವ ಉದ್ದೇಶ ಈ ಬಾರಿ ಸ್ವಲ್ಪ ಸೀರಿಯಸ್ಸಾಗಿದೆ. ಮರದ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ಕಟ್ಟಿ ನೇತುಹಾಕುವುದರಿಂದ ಏನಾದರೂ ಪ್ರಯೋಜನ ಇದೆಯಾ ? ಕಸವನ್ನು ಮರಗಳ ಬುಡಕ್ಕೆ ಹಾಕಿದರೆ ಗೊಬ್ಬರವಾದರೂ ಆಗುತ್ತಿತ್ತು. ಇದನ್ನರಿಯದೇ ಇರುವ, common sense ಕೂಡಾ ಇಲ್ಲದ ಜನಗಳೂ ಈ ಪ್ರಪಂಚದಲ್ಲಿದ್ದಾರೆ ಎಂದು ತೋರಿಸಲಿಕ್ಕೆ ಈ ಚಿತ್ರವನ್ನು ಹಾಕುತ್ತಿದ್ದೇನೆ. ಮರವನ್ನು ಕಸದಬುಟ್ಟಿಯನ್ನಾಗಿ ಮಾಡಿಕೊಂಡಿರುವುದು ವಿಚಿತ್ರ ವಿಪರ್ಯಾಸ.
ಈ ಬಾರಿ ವಿಚಿತ್ರವಾಗಿರುವುದು ಕಸದಬುಟ್ಟಿಯಲ್ಲ, ಅದನ್ನು ಸ್ಥಾಪಿಸಿರುವ ಸ್ಥಳ. ಪೋಸ್ಟ್ ಡಬ್ಬದ ಪಕ್ಕದಲ್ಲಿ ಇಟ್ಟಿದ್ದಾರೆ...ಒಂದು ವೇಳೆ ಕಸದ ಬುಟ್ಟಿಗೆ ಹೋಗಬೇಕಾದ ಕಾಗದ ಪೋಸ್ಟ್ ಡಬ್ಬದಲ್ಲಿ ಬಿದ್ದು, ಪೋಸ್ಟ್ ಆಗಬೇಕಿದ್ದ ಲಕೋಟೆ ಕಸದಬುಟ್ಟಿಯಲ್ಲಿ ಬಿದ್ದರೆ....just imagine ಮಾಡ್ಕೊಳ್ಳಿ....